Friday 25 July 2014

ನನ್ನೋಳಗಿನ ಪ್ರಶ್ನೆಗಳು

                                                ನನ್ನೋಳಗಿನ ಪ್ರಶ್ನೆಗಳು



                     ಬಹಳದಿನಗಳಿಂದಲೂ ಏನಾದರೂ ಬರೆಯಬೇಕು ಎಂಬ ಹಂಬಲ, ಆದರೆ ಪೆನ್ನು ಹಿಡಿದರೆ ಪದಗಳೇ ಹೋರಬರುತ್ತಿರಲಿಲ್ಲ. ಏನಾದರೂ ಆಗಲಿ ಇಂದು ಬರೆಯಲೇಬೇಕು ಎಂದು ನಿರ್ಧರಿಸಿದೆ. ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತಾಗ ಕೆಲವೊಂದು ವಿಷಯಗಳು ಬಹಳ ದಿನದಿಂದಲೂ ಮನದಲ್ಲಿ ಕೋರೆಯುತ್ತಿದ್ದವು, ಅವುಗಳು ಬರಹ ರೂಪದಲ್ಲಿದ್ದರೆ ಚೆನ್ನಾಗಿರುತ್ತಿರುತ್ತದೆ ಎಂದೆನಿಸಿತು. ನಾನು ಮೌನದಿಂದ ಇದ್ದಾಗ ಕೆಲವೊಂದು ಪ್ರಶ್ನೆಗಳು ನನ್ನೋಳಗೆ ಕುಹುಕುತ್ತಿರುತ್ತವೆ. ಕೆಲವೊಂದಕ್ಕೆ ಉತ್ತರ ಹುಡುಕಲೂ ಪ್ರಯತ್ನಿಸಿದರೂ ಅವುಗಳಿಗೆ ಸ್ಪಷ್ಟವಾದ ಉತ್ತರ ಇನ್ನೂ ದೊರೆತ್ತಿಲ್ಲ.
                     
                       ನಾವು  ಉತ್ತಮ ನಡತೆ, ಸತ್ಯ, ಪ್ರಾಮಾಣಿಕತೆ, ನಿಷ್ಟೆ ಇವುಗಳು ಕೇವಲ ಬರಹಕ್ಕೆ ಮಾತ್ರ ಸೀಮಿತವಾಗಿವೆಯೇ? ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾದ್ಯವಿಲ್ಲವೇ? ಅಳವಡಿಸಿಕೊಂಡರೇ ಅವುಗಳಿಂದಾಗುವ ಪ್ರಯೋಜನಗಳೇನು? ಹಾಗಾದರೇ ಪ್ರಯೋಜನ ಎಂದಾಕ್ಷಣ ನೆನಪಾಗುವುದು ಕೇವಲ ಲಾಭಕ್ಕಾಗಿ ಅಥವಾ ಹೆಸರಿಗಾಗಿಯೇ ನಾವು ಅವುಗಳನ್ನು ಅನುಸರಿಸುತ್ತಿದ್ದೆವೆಯಾ?

                    ನಾವು ನಂಬಿರುವ ಅತ್ಯಂತ ಶ್ರಧ್ದಾಕೇಂದ್ರಗಳಾದ ಮಠ ಮಂದಿರ, ಚರ್ಚ್, ಮಸೀದಿ, ಸೇವಾ ಸಂಸ್ಥೆಗಳು ಈ ಮೇಲಿನವುಗಳಿಗೆ ಅವಕಾಶ ಇದೆಯಾ? ಅಥವಾ ನಾವು ಅಂದರೆ ನಮ್ಮಂತ ಕೆಟ್ಟಜನಗಳು ಹಾಳು ಮಾಡಿದ್ದೇವೆಯಾ? ಆಥವಾ ಅವುಗಳ ಮೂಲ ಸ್ವರೂಪವೇ ಬದಲಾಗಿದೆಯಾ? ಇದು ಸಹ ಪ್ರಶ್ನೆಯಾಗಿಯೇ ಉಳಿದಿದೆ.

                     ಹಾಗಾದರೆ ಸನ್ನಡತೆ ಸನ್ಮಾರ್ಗದಲ್ಲಿ ನಡೆದವರೆಲ್ಲರೂ ಸುಖದಿಂದ, ನೆಮ್ಮದಿಯಿಂದ ಇದ್ದಾರೆಯೇ? ಇದ್ದಾರೆಂದರೇ ಅವರು ಎಲ್ಲಿ ಹೇಗೆ ಇದ್ದಾರೆ? ಕೆಲವರು ಹೇಳುತ್ತಾರೆ- '' ನಮ್ಮ ಸನ್ನಡತೆ ನಮ್ಮನ್ನು ಉಳಿಸುತ್ತದೆ ''  ಎಂದು, ಇದನ್ನು ನಂಬುವುದಾದರೂ ಹೇಗೆ, ಕೆಲವು ಮಹಾಪುರುಷರ ಇತಿಹಾಸವನ್ನು ತಿಳಿದರೆ ಅದು ಸತ್ಯವೆನಿಸಿದರು, ಅದು ಕೆಲವೊಂದು ಸಲ ಕೇವಲ ಪುಸ್ತಕ/ಬರಹದ ಲೇಖನಗಳಾಗಿಯೇ ಉಳಿಯುತ್ತವೆ. ಇಂದಿನ ಜಗತ್ತಿನಲ್ಲಿ ನಾವು ನಾಟಕದ ಪಾತ್ರದಾರಿಗಳಂತೆ  ವರ್ತಿಸುತ್ತಿಲ್ಲವೇ? ಪಾತ್ರದಾರಿಗಳಾದೇ ಇದ್ದರೇ ಬದುಕಲು ಸಾದ್ಯವಿಲ್ಲವೇ? ನಾನು ತಿಳಿದ ಮಟ್ಟಿಗೆ ನನ್ನ ಜೀವನದಲ್ಲಿ ಹೆಚ್ಚು ಪಾತ್ರದಾರಿಯಂತೆ ವರ್ತಿಸಿದ್ದೇನೆ ಅನಿಸುತ್ತದೆ. ಹಾಗೆ ಇದ್ದಾಗ ಹೆಚ್ಚಾಗಿ ಸಂತೋಷವಾಗಿದ್ದೇನೆ ಅನಿಸುತ್ತದೆ.
              ಕೆಲವರು ಹೇಳುತ್ತಾರೆ ''ನಾವು ಅಂದುಕೊಂಡಂತೆ ಯಾವಾಗಲೂ ಆಗುವುದಿಲ್ಲ, ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ, ಹಾಗೂ ಹೀಗೆ ಆಗುತ್ತದೆ ಎಂದು ಮೊದಲೇ ನಿರ್ದಾರವಾಗಿರುತ್ತದೆ'' ಎಂದು, ಮೊದಲೆ ನಿರ್ದಾರವಾಗಿದ್ದರೆ ಅವುಗಳು ಎಲ್ಲಿ, ಯಾವಾಗ ನಿರ್ದಾರವಾಗುತ್ತವೆ? ಇವು ನಮ್ಮ ಒಳ್ಳೆಯ ನಡತೆಯ ಮೇಲೆ ಹೇಗೆ ನಿರ್ದಾರವಾಗುತ್ತವೆ. ಈಗಿನ ಮನುಷ್ಯನಿಗೆ ಹೀಗೆ ಎಲ್ಲಿ ನಿರ್ದಾರವಾಗುತ್ತವೆ  ಎಂದು ತಿಳಿದಿದ್ದರೆ ಇಂದು ಅವುಗಳನ್ನು ತನ್ನ ಬಲದಿಂದ ತನ್ನ ಇಚ್ಚೆಗೆ ತಕ್ಕಂತೆ ಬದಲಿಸುತ್ತಿದ್ದನೊ? ಹಾಗಾದರೇ ಇಂದು ಒಳ್ಳೆಯ ಎನ್ನುವ ಪದವನ್ನು ಯಾವುದಕ್ಕೆ ಉಪಯೋಗಿಸಬೇಕು. ನಾವು ರಾಜಕಾರಣಿಗಳನ್ನು, ಇತರ ಗಣ್ಯವ್ಯಕ್ತಿಗಳನ್ನು ಭೇಟಿ ಆದಾಗ ಅಥವಾ ಸಭೆ ಸಮಾರಂಭಗಳಲ್ಲಿ ಅತ್ಯಂತ ಗೌರವದ ಪದಗಳಿಂದ ಗೌರವಿಸುತ್ತೇವೆ. ಆ ಗೌರವ ಕೇವಲ ಅವರ ಪದವಿಗ ಅಥವಾ ಆಧೀಕಾರಕ್ಕಾ ಅಥವಾ ಆ ಗೌರವಕ್ಕೆ ಅವರು ಅರ್ಹರಾ? ತಿಳಿಯುತ್ತಿಲ್ಲ. ಅಂತಹ ಹುದ್ದೆಯಲ್ಲಿರುವವರು ಇಂದು ಉತ್ತಮ ಕೆಲಸ ಮಾಡುತ್ತಿದ್ದಾರೆಯೇ? ಹಾಗಾದರೇ ಎಲ್ಲವೂ & ಎಲ್ಲರೂ ಸರಿಯಿದ್ದರೇ ಜಗತ್ತು ಹೀಗೆ ಇರುತ್ತಿತ್ತೆ?
             
           ಜಗತ್ತಿಗಿಂತ ಇಂದು ನಮ್ಮನ್ನು ನಾವು ಪ್ರಶ್ನೆಮಾಡಿಕೊಳ್ಳಬೇಕು? ಮೊದಲು ನಾವು ಬದಲಾಗಬೇಕಿದೆ. ಹಾಗೆಯೇ ನಮ್ಮ ಜೀವನ  ಎತ್ತ ಸಾಗುತ್ತಿದೆ ತಿಳಿಯದಾಗಿದೆ. ಅಂದ ಹಾಗೆ  ಇದನ್ನು ಬರೆಯುವಾಗ ನನ್ನದೇ ಆದ ಕವನದಲ್ಲಿನ ನಾಲ್ಕುಸಾಲುಗಳು ನೆನಪಾಗುತ್ತವೆ-


                       ನಾನು ದಾರಿಯಲ್ಲಿ ಹೊಗುತ್ತಿದ್ದೆ,
                       ನನ್ನದೇ ದಾರಿಯಲ್ಲಿ,
                       ನಾನು ಕಂಡೆ......... ಅನ್ನು, ಅದು
                       ನನ್ನನ್ನು ನೊಡಿತು, ನಾನು ಅದನ್ನು ನೊಡಲಾಗಲಿಲ್ಲ.

            ಹಾಗಾದರೇ ಇಲ್ಲಿ ನಾನು ನೋಡಿದ್ದಾದರೂ ಏನು?  ನಮ್ಮ ಜೀವನ ಹೇಗೆ ಸಾಗುತ್ತಿದೆ ಎಂಬುದು ತಿಳಿಯದಾಗಿದೆ. ಇಂದು ನಾವು ಏನನ್ನು ಮಾಡಬೇಕಿತ್ತೊ ಅದನ್ನು ಮಾಡುತ್ತಿಲ್ಲ, ಏನನ್ನು ಮಾಡಬಾರದೋ ಅವುಗಳನ್ನು ಮಾಡುತ್ತಿದ್ದೇವೆ, ಹಾಗಾದರೇ ಏನು ಮಾಡಬೇಕು? ನಾವು ಮಾಡುವುದಕ್ಕೆ ಉಳಿದ್ದಾದರೂ ಏನು? ನಾವು ಬೇರೆಯವರನ್ನೆ ದೂರುತ್ತೇವೆ, ಮೊದಲು ನಮ್ಮೋಳಗಿನ ಪಾತ್ರದಾರಿಯ ವೇಷ ಬದಲಾಗಬೇಕಿದೆ.

             ಇನ್ನೂ ಕೆಲವರು ಹೇಳುತ್ತಾರೆ, ಏನನ್ನಾದರೂ ಸಾಧನೆ ಮಾಡಬೇಕಾದರೇ ಗುರಿಯನ್ನು ಇಟ್ಟುಕೊಳ್ಳಬೇಕು, ಹಿಂದೆ ಸಾಧನೆ ಮಾಡಿದವರನ್ನು ಕೇಳಿದರೆ ಅವರು ಹೇಳುತ್ತಾರೆ ನಮ್ಮ ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ, ಇಂದು ನಮಗೆ ಗುರಿಯೂ ಇಲ್ಲ, ಹಿಂದೆ ಗುರುವೂ ಇಲ್ಲ. ಗುರುವಿಗೆ ಇಂದಿನ ದಿನಗಳಲ್ಲಿ ಎಷ್ಟು ಬೆಲೆ ಕೊಡಲಾಗುತ್ತಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಒಟ್ಟಾರೆ ಎಲ್ಲರು ಜೀವನ ನಡೆಸುತ್ತಿದ್ದಾರೆ.

               ತಾಂತ್ರಿಕತೆ ಮುಂದುವರೆದಂತೆ ಇಂದಿನ ಜನ ಸ್ವಾರ್ಥಿಗಳಾಗುತ್ತಿದ್ದಾರೆ. ಮುಗ್ದತೆ ಇದ್ದಲ್ಲಿ ಮಾನವೀಯತೆಗೆ ಸ್ಥಾನವಿರುತ್ತದೆ. ಅತಿಯಾದ ಜ್ಞಾನ ಪಡೆದಂತೆಲ್ಲ ಸ್ವಾರ್ಥಿಯಾಗುತ್ತಿದ್ದಾನೆ ಅನಿಸುತ್ತದೆ. ಹಿಂದಿನ ಕಾಲದಲ್ಲಿ ಒಂದು ಹಬ್ಬವಂದರೇ ಇಡೀ ಬಂಧುಗಳ ಸಂಗಮ, ಆದರೆ ಈಗ ಪಕ್ಕದ ಮನೆಯವರನ್ನು ಕರೆಯದ ಸ್ಥಿತಿಯಲ್ಲಿದ್ದೇವೆ. ಅಂದರೆ ಇಂದು  ಸ್ವಾರ್ಥಿಗಳಾಗದಿದ್ದರೆ, ಸ್ವಾವಲಂಬಿಗಳಾಗಲು ಸಾದ್ಯವಿಲ್ಲ ಎಂಬ ಮಾತು ಕೆಲವು ಸಲ ಒಪ್ಪಲೇಬೇಕು.

          ಹಿರಿಯರು ಹೇಳುತ್ತಾರೆ ಸತ್ಯವನ್ನೆ ಹೇಳಬೇಕು, ಸುಳ್ಳು ಹೇಳಬಾರದು, ಸುಳ್ಳು ಹೇಳುವುದು ಪಾಪದ ಕೆಲಸವೆಂದು, ಹಾಗಾದರೇ ಇಂದು ನಾವು ಎಷ್ಟು ಸತ್ಯವಂತರೂ ಎಂದು ನಮ್ಮನ್ನು ನಾವು ಪ್ರಶ್ನೆಮಾಡಿಕೊಳ್ಳಬೇಕಿದೆ.

     ಹೀಗೆ ನನ್ನೋಳಗೆ ಹತ್ತು ಹಲವು ಪ್ರಶ್ನೆಗಳು ನನ್ನ ಮನದಲ್ಲೆ ಹರಿದಾಡುತ್ತಿರುತ್ತವೆ. ಕೆಲವೊಂದಕ್ಕೆ ಉತ್ತರ ಸಿಕ್ಕರು ಅಸ್ಪಷ್ಟ ಉತ್ತರಗಳೇ ಹೆಚ್ಚು, ಉತ್ತರ ಹುಡುಕುತ್ತಾ  ಹೊಂದತೆ ಮತ್ತೆ ಪ್ರಶ್ನೆಗಳೇ ಹುಟ್ಟಿಕೊಳ್ಳುತ್ತಿವೆ.

  - NDG