Monday 11 August 2014

ನಮ್ಮೋಳಗಿನ ಬಂಧನದ ಸಂಕೋಲೆಗಳನ್ನು ಬಿಡಿಸಿಕೊಂಡಾಗ   ಮಾತ್ರ   ಸ್ವಾತಂತ್ರ್ಯದ ಕಲ್ಪನೆಗೆ ಅರ್ಥಬರುತ್ತದೆ
   ಪ್ರತಿ ವರ್ಷದಂತೆ ಈ ವರ್ಷವು ನಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸನಿಹದಲ್ಲಿದ್ದೇವೆ. ಇದು ಸಹ ಅಂಕಿ-ಅಂಶದ 68 ವರ್ಷದ ಸ್ವಾತಂತ್ರ್ಯಾ ದಿನಾಚರಣೆ ಆಗಲಿದೆ. ದೇಶದ ಮೂಲೆ-ಮೂಲೆಗೂ ಈ ದಿನವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದೇವೆ. ಈ ವರ್ಷವು ಅದೇ ಸಂಪ್ರದಾಯ ಮುಂದುವರೆಯಲಿದೆ.
  ಸ್ವಾತಂತ್ರ್ಯ ಪಡೆದು ಇನ್ನೂ ಎರಡು ವರ್ಷ ಕಳೆದರೆ, ಸುಮಾರು 7 ದಶಕಗಳು ಪೂರ್ಣಗೊಳ್ಳಲಿವೆ. 7 ದಶಕದ ಸಾಧನೆಯನ್ನು ಹಿಂದುರುಗಿ ನೋಡಿದರೆ, ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನೇತಾರರು ಇಂದು ಇದ್ದಿದ್ದರೆ ತುಂಬಾ ನೋವುಪಡುತ್ತಿದ್ದರು. ಏಕೆಂದರೆ ಅವರ ಸ್ವತಂತ್ರ್ಯ ಭಾರತದ ಕಲ್ಪನೆ ಇದಾಗಿರಲಿಲ್ಲ. ನಾವು ನಮ್ಮೋಳಗಿನ ಸಮಸ್ಯೆಗಳೊಂದಿಗೆ ಅತ್ಯಂತ ಗೊಂದಲದ ವಾತಾವರಣದಲ್ಲಿ ಬದುಕುತಿದ್ದೇವೆ. 
        ಸ್ವಾತಂತ್ರ್ಯವೆಂದರೆ ಕೇವಲ ಅದು ಬಂಧನದಿಂದ ಪಡೆದ ಮುಕ್ತಿಯಲ್ಲ. ಬಂಧನವನ್ನು ಬಿಡಿಸಿಕೊಳ್ಳಲು ಲಕ್ಷಾಂತರ ಜನರು ಹುತಾತ್ಮರಾಗಿ ಮುಂದಿನ ಪೀಳಿಗೆಯ ಉಳಿವಿಗಾಗಿ ಹೋರಾಡಿರುವುದು.
    ಈ ಮಹಾತ್ಮರು ತಂದುಕೊಟ್ಟ ಸ್ವತಂತ್ರ್ಯವನ್ನು ಇಂದು ನಮ್ಮಲ್ಲಿ ಜವಾನನಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಎಲ್ಲರೂ ಲಂಚಾವತಾರದಲ್ಲಿ ಸ್ವತಂತ್ರ್ಯರೇ, ಇನ್ನೂ ರಾಜಕಾರಣಿಗಳ ಕುರಿತು ಹೇಳಲು ಅಸಹ್ಯವೆನಿಸುತ್ತದೆ. ನಮ್ಮ ಕಾನೂನಿನ ವ್ಯವಸ್ಥೆಯನ್ನು ಊಹಿಸಿದರೆ ಸ್ವತಂತ್ರ್ಯವನ್ನು ನಾವು ಯಾವ ರೀತಿಯಲ್ಲಿ ಬಳಸಿಕೊಳ್ಳತ್ತಿದ್ದೇವೆಯೆಂದರೇ ಕೆಲವರನ್ನು ಅಪರಾಧಿ ಎಂದು ತಿಳಿದರೂ ಅವರಿಗೆ  ಕೋಟಿಗಟ್ಟಲೇ  ಖರ್ಚುಮಾಡಿ ರಕ್ಷಿಸಿಡುವ ಸಂದರ್ಭ ಒದಗಿ ಬರುತ್ತದೆ.
    ಇಂದು ನಮ್ಮ ದೇಶದಲ್ಲಿ ಸಮಸ್ಯೆಗಳನ್ನು ಪಟ್ಟಿಮಾಡುತ್ತಾ ಹೋದರೆ ನೂರಾರು, ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಜಾತೀಯತೇ, ರೈತರ ಆತ್ಮಹತ್ಯೆ, ಅತ್ಯಾಚಾರ ಪ್ರಕರಣಗಳು, ಬಯೋತ್ಪಾದನೆ, ದೇಶಿಕೈಗಾರಿಕೆಗಳ ನಾಶ……………….ಹೀಗೆ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ವಾತಂತ್ರ್ಯ ಪಡೆದು ಇಷ್ಟುವರ್ಷಗಳಾದರೂ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುವ ಬದಲು ಇನ್ನೂ ಹೆಚ್ಚಿನ ಸಮಸ್ಯೆಗಳು ಉದ್ಬವವಾಗಲು ಕಾರಣವಾದರೂ ಏನು ತಿಳಿಯದಾಗಿದೆ. ದೇಶವನ್ನು ಮುನ್ನಡೆಸಲು ಸಂಸ್ಕಾರಯುತ ನಾಯಕರ ಕೊರತೆ ಎದ್ದು ಕಾಣುತ್ತಿದೆ.
    ನಮ್ಮ ದೇಶವು ಇಡೀ ವಿಶ್ವಕ್ಕೆ ತೋರಿಸಿದ ಸಾಂಸ್ಕೃತಿಕ ಮತ್ತು ಸಾಮಾಜಿಕ, ನೈತಿಕ ಮೌಲ್ಯಗಳು ಇಂದು ಎಲ್ಲಿ ಹೋಗಿವೆ, ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗಿ ನಮ್ಮ ಸಂಸ್ಕೃತಿಯ ವಿನಾಶಕ್ಕೆ ನಾವೇ ಕಾರಣೀಭೂತರಾಗಿರುವುದು ಒಂದು ದುರಂತವೇ ಸರಿ. ಇಂದು ನಾವು ಆರ್ಥಿಕ ದೀವಾಳಿತನಕ್ಕಿಂತ ನೈತಿಕವಾಗಿ ಅದಃಪತನ ಹೊಂದಿದ್ದೇವೆ. ಧಾರ್ಮಿಕ ಸಂಸ್ಥೆಗಳು ಸಹ ಇಂದು ತಮ್ಮ ಮೂಲ ಸ್ವರೂಪವನ್ನು ಬದಲಾಯಿಸುತ್ತಾ ಸಾಗಿವೆ.
    ಇಂದು ಸ್ವತಂತ್ರ್ಯ ದಿನಾಚರಣೆಯನ್ನು ಕೇವಲ ಹಬ್ಬವಾಗಿ ಆಚರಿಸಲಾಗುತ್ತಿದೆ. ಅದು ಕೇವಲ ಆಗಸ್ಟ್ 15 ರಂದು ಮಾತ್ರ ನೆನಪಾಗುತ್ತದೆ. ಅಂದು ಕೇವಲ ಒಂದು ಕಾರ್ಯಕ್ರಮವನ್ನು ಆಚರಿಸುತ್ತೇವೆ. ಇಂತಹ ಕಾರ್ಯಕ್ರಮಗಳಲ್ಲಿ ದೇಶದ ಮುಖಂಡರುಗಳು ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮಾಡುತ್ತಾರೆ. ಅವರು ಹೇಳುವ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ.
    ಲಕ್ಷಾಂತರ ಜನರು ಜೀವತೆತ್ತುಗಳಿಸಿದ ಸ್ವಾತಂತ್ರ್ಯದ ಕಲ್ಪನೆ ಹೇಗಿದೆ? ಸ್ವಾತಂತ್ರ್ಯಾನಂತರ 68 ವರ್ಷಗಳು ನಡೆದುಬಂದ ಹಾದಿಗೆ ಪ್ರಸಕ್ತ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳನ್ನೂ ನೆನೆದರೆ ನೋವಾಗುತ್ತದೆ. ಇದು ಹೀಗೆ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಯವರು ಮತ್ತೊಂದು ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಬೇಕಾಗುತ್ತದೆ.
    ಒಟ್ಟಾರೆ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ನಮ್ಮ ಭಾರತದ ಅತ್ಯಂತ ಶ್ರೇಷ್ಠ ಸಂಸ್ಕೃತಿ, ಧಾರ್ಮಿಕ ಕಲ್ಪನೆಗಳು ನಶಿಸಲಿವೆ. ಅವುಗಳನ್ನು ಉಳಿಸಲು ಪ್ರತಿಯೊಬ್ಬರು ಪಣ ತೊಡಬೇಕಾಗಿದೆ. ಕೇವಲ ಆಚರಣೆಯಾಗಿ ಸ್ವಾತಂತ್ರ್ಯ ದಿನವನ್ನೂ ಆಚರಿಸದೇ ಆ ದಿನವನ್ನು ನಮ್ಮ ಮಹಾನ್ ನಾಯಕರ ಸ್ವಾತಂತ್ರ್ಯ ಭಾರತದ ಕಲ್ಪನೆಯನ್ನು ಸಕಾರಗಳಿಸುವತ್ತ ಹೆಜ್ಜೆಹಾಕಬೇಕಾಗಿದೆ.                                                                                                                                                                                                                                                      NDG

Friday 25 July 2014

ನನ್ನೋಳಗಿನ ಪ್ರಶ್ನೆಗಳು

                                                ನನ್ನೋಳಗಿನ ಪ್ರಶ್ನೆಗಳು



                     ಬಹಳದಿನಗಳಿಂದಲೂ ಏನಾದರೂ ಬರೆಯಬೇಕು ಎಂಬ ಹಂಬಲ, ಆದರೆ ಪೆನ್ನು ಹಿಡಿದರೆ ಪದಗಳೇ ಹೋರಬರುತ್ತಿರಲಿಲ್ಲ. ಏನಾದರೂ ಆಗಲಿ ಇಂದು ಬರೆಯಲೇಬೇಕು ಎಂದು ನಿರ್ಧರಿಸಿದೆ. ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತಾಗ ಕೆಲವೊಂದು ವಿಷಯಗಳು ಬಹಳ ದಿನದಿಂದಲೂ ಮನದಲ್ಲಿ ಕೋರೆಯುತ್ತಿದ್ದವು, ಅವುಗಳು ಬರಹ ರೂಪದಲ್ಲಿದ್ದರೆ ಚೆನ್ನಾಗಿರುತ್ತಿರುತ್ತದೆ ಎಂದೆನಿಸಿತು. ನಾನು ಮೌನದಿಂದ ಇದ್ದಾಗ ಕೆಲವೊಂದು ಪ್ರಶ್ನೆಗಳು ನನ್ನೋಳಗೆ ಕುಹುಕುತ್ತಿರುತ್ತವೆ. ಕೆಲವೊಂದಕ್ಕೆ ಉತ್ತರ ಹುಡುಕಲೂ ಪ್ರಯತ್ನಿಸಿದರೂ ಅವುಗಳಿಗೆ ಸ್ಪಷ್ಟವಾದ ಉತ್ತರ ಇನ್ನೂ ದೊರೆತ್ತಿಲ್ಲ.
                     
                       ನಾವು  ಉತ್ತಮ ನಡತೆ, ಸತ್ಯ, ಪ್ರಾಮಾಣಿಕತೆ, ನಿಷ್ಟೆ ಇವುಗಳು ಕೇವಲ ಬರಹಕ್ಕೆ ಮಾತ್ರ ಸೀಮಿತವಾಗಿವೆಯೇ? ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾದ್ಯವಿಲ್ಲವೇ? ಅಳವಡಿಸಿಕೊಂಡರೇ ಅವುಗಳಿಂದಾಗುವ ಪ್ರಯೋಜನಗಳೇನು? ಹಾಗಾದರೇ ಪ್ರಯೋಜನ ಎಂದಾಕ್ಷಣ ನೆನಪಾಗುವುದು ಕೇವಲ ಲಾಭಕ್ಕಾಗಿ ಅಥವಾ ಹೆಸರಿಗಾಗಿಯೇ ನಾವು ಅವುಗಳನ್ನು ಅನುಸರಿಸುತ್ತಿದ್ದೆವೆಯಾ?

                    ನಾವು ನಂಬಿರುವ ಅತ್ಯಂತ ಶ್ರಧ್ದಾಕೇಂದ್ರಗಳಾದ ಮಠ ಮಂದಿರ, ಚರ್ಚ್, ಮಸೀದಿ, ಸೇವಾ ಸಂಸ್ಥೆಗಳು ಈ ಮೇಲಿನವುಗಳಿಗೆ ಅವಕಾಶ ಇದೆಯಾ? ಅಥವಾ ನಾವು ಅಂದರೆ ನಮ್ಮಂತ ಕೆಟ್ಟಜನಗಳು ಹಾಳು ಮಾಡಿದ್ದೇವೆಯಾ? ಆಥವಾ ಅವುಗಳ ಮೂಲ ಸ್ವರೂಪವೇ ಬದಲಾಗಿದೆಯಾ? ಇದು ಸಹ ಪ್ರಶ್ನೆಯಾಗಿಯೇ ಉಳಿದಿದೆ.

                     ಹಾಗಾದರೆ ಸನ್ನಡತೆ ಸನ್ಮಾರ್ಗದಲ್ಲಿ ನಡೆದವರೆಲ್ಲರೂ ಸುಖದಿಂದ, ನೆಮ್ಮದಿಯಿಂದ ಇದ್ದಾರೆಯೇ? ಇದ್ದಾರೆಂದರೇ ಅವರು ಎಲ್ಲಿ ಹೇಗೆ ಇದ್ದಾರೆ? ಕೆಲವರು ಹೇಳುತ್ತಾರೆ- '' ನಮ್ಮ ಸನ್ನಡತೆ ನಮ್ಮನ್ನು ಉಳಿಸುತ್ತದೆ ''  ಎಂದು, ಇದನ್ನು ನಂಬುವುದಾದರೂ ಹೇಗೆ, ಕೆಲವು ಮಹಾಪುರುಷರ ಇತಿಹಾಸವನ್ನು ತಿಳಿದರೆ ಅದು ಸತ್ಯವೆನಿಸಿದರು, ಅದು ಕೆಲವೊಂದು ಸಲ ಕೇವಲ ಪುಸ್ತಕ/ಬರಹದ ಲೇಖನಗಳಾಗಿಯೇ ಉಳಿಯುತ್ತವೆ. ಇಂದಿನ ಜಗತ್ತಿನಲ್ಲಿ ನಾವು ನಾಟಕದ ಪಾತ್ರದಾರಿಗಳಂತೆ  ವರ್ತಿಸುತ್ತಿಲ್ಲವೇ? ಪಾತ್ರದಾರಿಗಳಾದೇ ಇದ್ದರೇ ಬದುಕಲು ಸಾದ್ಯವಿಲ್ಲವೇ? ನಾನು ತಿಳಿದ ಮಟ್ಟಿಗೆ ನನ್ನ ಜೀವನದಲ್ಲಿ ಹೆಚ್ಚು ಪಾತ್ರದಾರಿಯಂತೆ ವರ್ತಿಸಿದ್ದೇನೆ ಅನಿಸುತ್ತದೆ. ಹಾಗೆ ಇದ್ದಾಗ ಹೆಚ್ಚಾಗಿ ಸಂತೋಷವಾಗಿದ್ದೇನೆ ಅನಿಸುತ್ತದೆ.
              ಕೆಲವರು ಹೇಳುತ್ತಾರೆ ''ನಾವು ಅಂದುಕೊಂಡಂತೆ ಯಾವಾಗಲೂ ಆಗುವುದಿಲ್ಲ, ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ, ಹಾಗೂ ಹೀಗೆ ಆಗುತ್ತದೆ ಎಂದು ಮೊದಲೇ ನಿರ್ದಾರವಾಗಿರುತ್ತದೆ'' ಎಂದು, ಮೊದಲೆ ನಿರ್ದಾರವಾಗಿದ್ದರೆ ಅವುಗಳು ಎಲ್ಲಿ, ಯಾವಾಗ ನಿರ್ದಾರವಾಗುತ್ತವೆ? ಇವು ನಮ್ಮ ಒಳ್ಳೆಯ ನಡತೆಯ ಮೇಲೆ ಹೇಗೆ ನಿರ್ದಾರವಾಗುತ್ತವೆ. ಈಗಿನ ಮನುಷ್ಯನಿಗೆ ಹೀಗೆ ಎಲ್ಲಿ ನಿರ್ದಾರವಾಗುತ್ತವೆ  ಎಂದು ತಿಳಿದಿದ್ದರೆ ಇಂದು ಅವುಗಳನ್ನು ತನ್ನ ಬಲದಿಂದ ತನ್ನ ಇಚ್ಚೆಗೆ ತಕ್ಕಂತೆ ಬದಲಿಸುತ್ತಿದ್ದನೊ? ಹಾಗಾದರೇ ಇಂದು ಒಳ್ಳೆಯ ಎನ್ನುವ ಪದವನ್ನು ಯಾವುದಕ್ಕೆ ಉಪಯೋಗಿಸಬೇಕು. ನಾವು ರಾಜಕಾರಣಿಗಳನ್ನು, ಇತರ ಗಣ್ಯವ್ಯಕ್ತಿಗಳನ್ನು ಭೇಟಿ ಆದಾಗ ಅಥವಾ ಸಭೆ ಸಮಾರಂಭಗಳಲ್ಲಿ ಅತ್ಯಂತ ಗೌರವದ ಪದಗಳಿಂದ ಗೌರವಿಸುತ್ತೇವೆ. ಆ ಗೌರವ ಕೇವಲ ಅವರ ಪದವಿಗ ಅಥವಾ ಆಧೀಕಾರಕ್ಕಾ ಅಥವಾ ಆ ಗೌರವಕ್ಕೆ ಅವರು ಅರ್ಹರಾ? ತಿಳಿಯುತ್ತಿಲ್ಲ. ಅಂತಹ ಹುದ್ದೆಯಲ್ಲಿರುವವರು ಇಂದು ಉತ್ತಮ ಕೆಲಸ ಮಾಡುತ್ತಿದ್ದಾರೆಯೇ? ಹಾಗಾದರೇ ಎಲ್ಲವೂ & ಎಲ್ಲರೂ ಸರಿಯಿದ್ದರೇ ಜಗತ್ತು ಹೀಗೆ ಇರುತ್ತಿತ್ತೆ?
             
           ಜಗತ್ತಿಗಿಂತ ಇಂದು ನಮ್ಮನ್ನು ನಾವು ಪ್ರಶ್ನೆಮಾಡಿಕೊಳ್ಳಬೇಕು? ಮೊದಲು ನಾವು ಬದಲಾಗಬೇಕಿದೆ. ಹಾಗೆಯೇ ನಮ್ಮ ಜೀವನ  ಎತ್ತ ಸಾಗುತ್ತಿದೆ ತಿಳಿಯದಾಗಿದೆ. ಅಂದ ಹಾಗೆ  ಇದನ್ನು ಬರೆಯುವಾಗ ನನ್ನದೇ ಆದ ಕವನದಲ್ಲಿನ ನಾಲ್ಕುಸಾಲುಗಳು ನೆನಪಾಗುತ್ತವೆ-


                       ನಾನು ದಾರಿಯಲ್ಲಿ ಹೊಗುತ್ತಿದ್ದೆ,
                       ನನ್ನದೇ ದಾರಿಯಲ್ಲಿ,
                       ನಾನು ಕಂಡೆ......... ಅನ್ನು, ಅದು
                       ನನ್ನನ್ನು ನೊಡಿತು, ನಾನು ಅದನ್ನು ನೊಡಲಾಗಲಿಲ್ಲ.

            ಹಾಗಾದರೇ ಇಲ್ಲಿ ನಾನು ನೋಡಿದ್ದಾದರೂ ಏನು?  ನಮ್ಮ ಜೀವನ ಹೇಗೆ ಸಾಗುತ್ತಿದೆ ಎಂಬುದು ತಿಳಿಯದಾಗಿದೆ. ಇಂದು ನಾವು ಏನನ್ನು ಮಾಡಬೇಕಿತ್ತೊ ಅದನ್ನು ಮಾಡುತ್ತಿಲ್ಲ, ಏನನ್ನು ಮಾಡಬಾರದೋ ಅವುಗಳನ್ನು ಮಾಡುತ್ತಿದ್ದೇವೆ, ಹಾಗಾದರೇ ಏನು ಮಾಡಬೇಕು? ನಾವು ಮಾಡುವುದಕ್ಕೆ ಉಳಿದ್ದಾದರೂ ಏನು? ನಾವು ಬೇರೆಯವರನ್ನೆ ದೂರುತ್ತೇವೆ, ಮೊದಲು ನಮ್ಮೋಳಗಿನ ಪಾತ್ರದಾರಿಯ ವೇಷ ಬದಲಾಗಬೇಕಿದೆ.

             ಇನ್ನೂ ಕೆಲವರು ಹೇಳುತ್ತಾರೆ, ಏನನ್ನಾದರೂ ಸಾಧನೆ ಮಾಡಬೇಕಾದರೇ ಗುರಿಯನ್ನು ಇಟ್ಟುಕೊಳ್ಳಬೇಕು, ಹಿಂದೆ ಸಾಧನೆ ಮಾಡಿದವರನ್ನು ಕೇಳಿದರೆ ಅವರು ಹೇಳುತ್ತಾರೆ ನಮ್ಮ ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ, ಇಂದು ನಮಗೆ ಗುರಿಯೂ ಇಲ್ಲ, ಹಿಂದೆ ಗುರುವೂ ಇಲ್ಲ. ಗುರುವಿಗೆ ಇಂದಿನ ದಿನಗಳಲ್ಲಿ ಎಷ್ಟು ಬೆಲೆ ಕೊಡಲಾಗುತ್ತಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಒಟ್ಟಾರೆ ಎಲ್ಲರು ಜೀವನ ನಡೆಸುತ್ತಿದ್ದಾರೆ.

               ತಾಂತ್ರಿಕತೆ ಮುಂದುವರೆದಂತೆ ಇಂದಿನ ಜನ ಸ್ವಾರ್ಥಿಗಳಾಗುತ್ತಿದ್ದಾರೆ. ಮುಗ್ದತೆ ಇದ್ದಲ್ಲಿ ಮಾನವೀಯತೆಗೆ ಸ್ಥಾನವಿರುತ್ತದೆ. ಅತಿಯಾದ ಜ್ಞಾನ ಪಡೆದಂತೆಲ್ಲ ಸ್ವಾರ್ಥಿಯಾಗುತ್ತಿದ್ದಾನೆ ಅನಿಸುತ್ತದೆ. ಹಿಂದಿನ ಕಾಲದಲ್ಲಿ ಒಂದು ಹಬ್ಬವಂದರೇ ಇಡೀ ಬಂಧುಗಳ ಸಂಗಮ, ಆದರೆ ಈಗ ಪಕ್ಕದ ಮನೆಯವರನ್ನು ಕರೆಯದ ಸ್ಥಿತಿಯಲ್ಲಿದ್ದೇವೆ. ಅಂದರೆ ಇಂದು  ಸ್ವಾರ್ಥಿಗಳಾಗದಿದ್ದರೆ, ಸ್ವಾವಲಂಬಿಗಳಾಗಲು ಸಾದ್ಯವಿಲ್ಲ ಎಂಬ ಮಾತು ಕೆಲವು ಸಲ ಒಪ್ಪಲೇಬೇಕು.

          ಹಿರಿಯರು ಹೇಳುತ್ತಾರೆ ಸತ್ಯವನ್ನೆ ಹೇಳಬೇಕು, ಸುಳ್ಳು ಹೇಳಬಾರದು, ಸುಳ್ಳು ಹೇಳುವುದು ಪಾಪದ ಕೆಲಸವೆಂದು, ಹಾಗಾದರೇ ಇಂದು ನಾವು ಎಷ್ಟು ಸತ್ಯವಂತರೂ ಎಂದು ನಮ್ಮನ್ನು ನಾವು ಪ್ರಶ್ನೆಮಾಡಿಕೊಳ್ಳಬೇಕಿದೆ.

     ಹೀಗೆ ನನ್ನೋಳಗೆ ಹತ್ತು ಹಲವು ಪ್ರಶ್ನೆಗಳು ನನ್ನ ಮನದಲ್ಲೆ ಹರಿದಾಡುತ್ತಿರುತ್ತವೆ. ಕೆಲವೊಂದಕ್ಕೆ ಉತ್ತರ ಸಿಕ್ಕರು ಅಸ್ಪಷ್ಟ ಉತ್ತರಗಳೇ ಹೆಚ್ಚು, ಉತ್ತರ ಹುಡುಕುತ್ತಾ  ಹೊಂದತೆ ಮತ್ತೆ ಪ್ರಶ್ನೆಗಳೇ ಹುಟ್ಟಿಕೊಳ್ಳುತ್ತಿವೆ.

  - NDG